Close X

ಅಪ್ಪಾಜಿಯ ಆದರ್ಶಗಳನ್ನು ಎತ್ತಿಹಿಡಿಯುವೆ – ಶಿವಣ್ಣ

ಕನ್ನಡ ವರನಟ, ದಾದಾ ಸಾಹೇಬ್ ಫಾಲ್ಕೆ ಡಾ. ರಾಜ್‌ರ 84ನೇ ಜನ್ಮದಿನವಾದ ಮಂಗಳವಾರ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಣ್ಣ ಗುಡುಗಿದರು. ಅವರು ಹೀಗೆ ಗುಡುಗುವುದಕ್ಕೆ ಕಾರಣವೂ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಗುಡುಗಿದ್ದು ಹೀಗೆ : “ಇದೇ ರೀತಿ ಮುಂದುವರೆದರೆ ನಾನು ಸುಮ್ಮನಿರುವುದಿಲ್ಲ. ಅಪ್ಪಾಜಿ ಮೇಲಾಣೆ. ನನ್ನ ಪ್ರಾಣ ಕೊಟ್ಟಾದರೂ ಸರಿ ನಾನು ಹೋರಾಟ ಮಾಡುತ್ತೇನೆ. ”

shivarajkumar Dr. Rajkumar Birthday Celebrationsಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಣ್ಣಾವ್ರ ಪುಣ್ಯಭೂಮಿಯಲ್ಲಿ ನಡೆದ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತನಾಡಿದ ಶಿವಣ್ಣ, ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತಿವೆ. ಅದು ನಿಮಗೂ ಗೊತ್ತು. ಅದು ಹೀಗೆ ಮುಂದುವರಿದುಕೊಂಡು ಹೋದರೆ ನಾನು ಸುಮ್ಮನಿರಲ್ಲ. ಆದರ್ಶವನ್ನು ಪ್ರಾಣಕೊಟ್ಟಾದರೂ ಉಳಿಸುತ್ತೇನೆ. ಇದು ಅಪ್ಪಾಜಿಯ ಮೇಲಾಣೆ ಎಂದು ಏರುದನಿಯಲ್ಲಿ ಎಚ್ಚರಿಸಿದರು.

ಕನ್ನಡ ಚಲನಚಿತ್ರ ರಂಗದ ಬಗ್ಗೆ ಅಪ್ಪಾಜಿ ತುಂಬಾ ಒಲವು ಹೊಂದಿದ್ದರು. ಹಾಗಂತ ಅನ್ಯ ಭಾಷೆಯ ಚಿತ್ರವನ್ನು ಎಂದೂ ವಿರೋಧಿಸಿದವರಲ್ಲ. ಆದರೆ, ಅನ್ಯ ಭಾಷೆಯ ಚಿತ್ರವನ್ನು ಡಬ್ಬಿಂಗ್ ಮಾಡುವುದನ್ನು ಒಪ್ಪುತ್ತಿರಲಿಲ್ಲ ಎಂದು ಕನ್ನಡ ಚಲನಚಿತ್ರ ರಂಗದ ಬಗ್ಗೆ ಡಾ. ರಾಜ್‌ಗೆ ಇದ್ದ ಕಾಳಜಿಯನ್ನು ತಿಳಿಸಿದರು. ಪರಭಾಷೆಯ ಚಿತ್ರಗಳ ರಿಮೇಕ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಂತೆ ಕಾಣುತ್ತಿದೆ. ಅಪ್ಪಾಜಿ ಕನ್ನಡ ಚಲನಚಿತ್ರ ರಂಗದ ಬಗ್ಗೆ ಇಟ್ಟಿದ್ದ ಕನಸು ಮತ್ತು ಆದರ್ಶ ಮಣ್ಣುಪಾಲು ಮಾಡಲು ನಾನು ನೀಡುವುದಿಲ್ಲ. ಇದಕ್ಕೆ ನನ್ನ ಕುಟುಂಬದವರ ಬೆಂಬಲವಿದೆ. ಅಭಿಮಾನಿಗಳ ಸಹಕಾರವಿದೆ. ನಾನು ಯಾರಿಗೂ ಹೆದರೋದಿಲ್ಲ. ತಪ್ಪು ಮಾಡಲು ಬಿಡಲ್ಲ. ತೀವ್ರವಾದ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಗೆ ನೀಡಿದರು.

ಕನ್ನಡ ಚಿತ್ರರಂಗದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ತಿಳಿಯುತ್ತಿದೆ. ಎಲ್ಲರಿಗೂ ಅದು ಗೊತ್ತಿದೆ. ತಪ್ಪುಗಳನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ ನಾನು ಸುಮ್ಮನಿರಲ್ಲ. ಅಪ್ಪಾಜಿಯ ಆಸೆ, ಆದರ್ಶಕ್ಕೆ ವಿರುದ್ದವಾಗಿ ನಡೆದರೆ ಜೀವ ನೀಡಿಯಾದರು ವಿರೋಧಿಸುತ್ತೇನೆ. ನಾವು ಸುಮ್ಮನಿದ್ದೇವೆಂದು ತಪ್ಪು ತಿಳಿಯಬೇಡಿ. ಪರಭಾಷೆ ಚಿತ್ರಗಳ ಬಗ್ಗೆ ಅಭಿಮಾನ ಇರಲಿ. ಆದರೆ, ಮಿತಿ ಬೇಕು. ಮಿತಿ ಮೀರಿ ವರ್ತಿಸಿದರೆ ಕನ್ನಡಿಗರಾದ ನಾವು ಹೋರಾಟಕ್ಕಿಳಿಯುತ್ತೇವೆ ಎಂದು ಘರ್ಜಿಸಿದರು.

Related Posts Plugin for WordPress, Blogger...
Copyright © 2017 KannadaHanigalu – An entertainment site for kannada Lovers. Disclaimer. All rights reserved. Developed and Maintained by Focus4Infotech